ಕಲೆ ಮತ್ತು ನೀತಿ

ಈ ವಿಷಯವನ್ನು ಚರ್ಚಿಸುವಾಗ ಎರಡು ಮುಖ್ಯ ಪ್ರಶ್ನೆಗಳು ನಮ್ಮೆದುರಿಗೆ ನಿಲ್ಲುತ್ತವೆ. ಒಂದು ಕಲಾವಿದನಿಗೆ ಸಂಬಂಧಿಸಿದ್ದು; ಇನ್ನೊಂದು ಕಲಾಸ್ವಾದಿ ವರ್ಗಕ್ಕೆ ಸಂಬಂಧಿಸಿದ್ದು.

ಕಲೆಗಾರ ಸೌಶೀಲ್ಯವಂತನಾಗಿರಲೇಬೇಕೆ? ಸ್ವಭಾವದಲ್ಲೂ ನಡತೆಯಲ್ಲೂ ಅಶುಚಿಯಾದವನು ಉತ್ತಮ ಕಲಾಕೃತಿಯನ್ನು ನಿರ್ಮಿಸಲಾರನೆ? ಕಲಾವಿದನಿಗೂ ಅವನ ಎಸಕವಾದ ಕಲಾವಸ್ತುವಿಗೂ ಈ ಬಗೆಯ ಕಾರ್ಯಕಾರಣತ್ವವನ್ನು ಅನ್ವಯಿಸುವುದು ಸರಿ, ನ್ಯಾಯ, ತರ್ಕಸಮ್ಮತ ಎಂದು ಭಾಸವಾಗಬಹುದು. ಆದರೆ ಕಲೆಯ ಇತಿಹಾಸದಲ್ಲಿ ನಿಶ್ಚಯವಾಗಿ ಆಗಿರುವ ವಿದ್ಯಾಮಾನಗಳನ್ನು ಕೊಂಚಮಟ್ಟಿಗೆ ಪರಿಶೀಲಿಸಿದರೂ ಸಾಕು ; ಅಂಥ ನಿರ್ಧಾರಕ್ಕೆ ಸಾಕ್ಷ್ಯ ದೊರಕುವುದಿಲ್ಲ. ಸಾವಿರಾರು ಕಲೆಗಾರರಲ್ಲಿ ಎಷ್ಟೋ ಮಂದಿ ತಮ್ಮ ಗುಣದಲ್ಲೂ ಶೀಲದಲ್ಲೂ ಕಲುಶಿತರು ಎಂಬುದನ್ನು ಮರೆಮಾಚುವಂತಿಲ್ಲ. ಮುಂಗೋಪ, ಅಹಂಕಾರ ಲೋಭ, ಹೊಟ್ಟೆಕಿಚ್ಚು ಮೊದಲಾದ ಸಾಮಾನ್ಯ ದೋಷಗಳೇ ಅಲ್ಲದೆ ವಂಚನೆ, ವಿಷಯಲಾಂಪಟ್ಯ, ದ್ರೋಹ, ಮುಂತಾದ ದೊಡ್ಡ ಕಲಂಕಗಳು ಅವರಲ್ಲಿ ಕಂಡುಬರುತ್ತವೆ. ಅವರ ಕಲಾನಿರ್ಮಿತಿಗಳಾದರೋ ಹೆಚ್ಚು ಕಡಿಮೆ, ನಿರ್ದಿಷ್ಟ, ಸೊಗಸು, ಮಹೋತ್ಕøಷ್ಟ. ಕೆಲವು ನಗರಗಳಲ್ಲಿ ಕಲಾವಿದರ ಕೇರಿ ಎಂಬ ಪ್ರತ್ಯೇಕ ಭಾಗ ಉಂಟು. ಅಲ್ಲಿ ಸಭ್ಯ ಸಮಾಜದ ಭಾಗವಾದ ರೀತಿನೀತಿಗೆ ಅವಕಾಶ ತೀರ ಕಡಿಮೆ. ಅಲ್ಲಿ ಕಷ್ಟಕಾರ್ಪಣ್ಯಗಳಿಂದ ತೊಳಲುತ್ತ ಕಲಾದೇವಿಯ ಅನುಗ್ರಹಕ್ಕೆ ಹೇಗೋ ಪಾತ್ರರಾಗಿ ಅತ್ಯುತ್ತಮ ಕೃತಿಗಳನ್ನು ರಚಿಸಿ ಯಥೇಷ್ಟ ಹಣವನ್ನೂ ಕೀರ್ತಿಯನ್ನೂ ಗಳಿಸಿಕೊಂಡು ಸಭ್ಯಸಮಾಜದಲ್ಲಿ ಗಣ್ಯರಾಗಿ ಬಾಳಿದವರುಂಟು. ಅಷ್ಟೇಕೆ, ಭಾರತದ ಹಿಂದಣ ತಲೆಮಾರುಗಳಲ್ಲಿ ನರ್ತನ, ಸಂಗೀತ ಕಲೆಗಳಲ್ಲಿ ಬಹಳ ಪ್ರಸಿದ್ಧರೆಂದು ಹೆಸರಾಂತವರಲ್ಲಿ ಎಷ್ಟೋ ಮಂದಿ ವೇಶ್ಯೆಯರಿದ್ದರು.

ಕಲಾವಿದನ ಗುಣಶೀಲ ಮತ್ತು ಜೀವನಕ್ರಮ ಅವನಿಗೆ ವೈಯಕ್ತಿಕವಾಗಿ ಹೊಂದಿಕೊಂಡ ವಿಚಾರ. ಅವು ಅವನ ಕಲೋದ್ದೇಶದ ಮೇಲಾಗಲಿ, ಕಲಾವಿಧಾನದ ಮೇಲಾಗಲಿ, ಕಲಾ ನೈಪುಣ್ಯದ ಮೇಲಾಗಲಿ, ಬೀರುವ ಪ್ರಭಾವ ಹೆಚ್ಚಿನದು ಎಂದು ಭಾವಿಸುವುದು ತಪ್ಪಾದೀತು. ಒಂದು ದೃಷ್ಟಿಯಿಂದ ನೋಡಿದರೆ ಕಲಾವಿದ ಯಮಳ ಬದುಕಿನ ಜೀವಿ! ಅವನ ಸ್ವಂತ ಬದುಕು ಒಂದು, ಕಲೆಗಾರನಾಗಿ ಬದುಕು ಇನ್ನೊಂದು. ಎರಡಕ್ಕೂ ಬಾಂಧವ್ಯ ಇದ್ದರೂ ಇರಬಹುದು, ಇಲ್ಲದಿದ್ದರೂ ಆಗುತ್ತದೆ. ಕಲಾವಿದ ಮನುಷ್ಯ ಮಾತ್ರನಾದ್ದರಿಂದ ಕೆಲವು ಕಾಲ ಭೂಮಿಯ ಮೇಲೆ ಇದ್ದು ಆಯುಷ್ಯ ತೀರಿದೊಡನೆ ಅದೃಶ್ಯನಾಗುತ್ತಾನೆ. ಅವನ ಕೃತಿಗಳಾದರೋ ಅನೇಕ ಶತಮಾನ ಹೊಸ ಹೊಸ ತಲೆಮಾರುಗಳಿಗೆ ವಿಶೇಷ ಬಗೆಯ ತಣಿವನ್ನು ನೀಡುತ್ತ ಇರುತ್ತವೆ. ಒಂದು ದೃಷ್ಟಿಯಲ್ಲಿ ಕಲಾವಿದ ಅಲ್ಪಾಯು, ಕಲೆ ಚಿರಾಯು. ಹೊಯ್ಸಳ ದೇವಾಲಯದ ಮದನಕೈ ಪ್ರತಿಮೆಗಳನ್ನು ಕೆತ್ತಿ ನಿಲ್ಲಿಸಿದವರಾರು, ಅವನ ಬಾಳು ಹೇಗಿತ್ತು-ಇತ್ಯಾದಿ ಪ್ರಶ್ನೆಗೆ ಉತ್ತರವೇ ಇಲ್ಲ. ಆ ಪ್ರತಿಮೆಗಳಾದರೋ ಪರಮಾಹ್ಲಾದದ ಬುಗ್ಗೆಗಳು. ಚಿತ್ರಕಾರ ಟಿಷಿಯನ್ ಅಸೂಯಾಪರ; ವಾಗ್ಗೇಯಕಾರರಾದ ಬಾಕ್, ಬೇತೋವನರೂ ಹಾಗೆಯೇ. ರಾಸಿನಿಗೆ ಅತ್ಯಂತ ಜಂಬ. ಇದನ್ನೆಲ್ಲ ಈಗ ಯಾರೂ ಬಗೆಯರು. ಎಲ್ಲರೂ ಅವರ ಉಚ್ಚ ಕೃತಿಗಳ ಅಪೂರ್ವ ಸವಿಯನ್ನು ತಿರುತಿರುಗಿ ಅನುಭವಿಸಲು ಹಾತೊರೆಯುತ್ತಾರೆ.

ಇನ್ನು, ಕಲೆ ಜನರಲ್ಲಿ ಉಂಟುಮಾಡುವ ಪರಿಣಾಮವನ್ನು ಕುರಿತು ಎರಡು ಮಾತು. ಸಾಮಾನ್ಯರಾಗಲಿ, ರಸಜ್ಞರಾಗಲಿ, ವಿಮರ್ಶಕರಾಗಲಿ, ಕಲೆಯಿಂದ ತಮಗೆ ಏನು ಆಗಬೇಕೆಂಬ ಅಪೇಕ್ಷೆಯನ್ನು ಮುಂದಿಟ್ಟುಕೊಂಡೇ ಕಲಾನುಭವಕ್ಕೆ ಕೈ ಹಾಕುತ್ತಾರೆಯೇ? ಚಿತ್ರವನ್ನು ವೀಕ್ಷಿಸುವುದೊ ಸಂಗೀತವನ್ನು ಆಲಿಸುವುದೊ ನಾಟಕವನ್ನು ನೋಡುವುದೊ ಕಾದಂಬರಿಯನ್ನು ಓದುವುದೋ ಯಾವುದೇ ಉದ್ಯಮವಾಗಲಿ ಅದು ಕೇವಲ ಲೌಕಿಕ ಜೀವನದಿಂದ ವ್ಯತ್ಯಸ್ತವಾದ ವ್ಯಾಪಾರ. ಕಲಾಕೃತಿಯಿಂದ ತಮಗೆ ನೀತಿಬೋಧೆ ಒದಗಿ ಅದರಿಂದ ತಮ್ಮ ಜೀವನ ಹೆಚ್ಚು ನೆಟ್ಟಗಾಗಬೇಕೆಂಬುದು ಅವರ ಅಭಿಲಾಷೆಯೆ? ಅಂಥವರು ಇಲ್ಲವೆಂದೇ ಹೇಳಲು ಬಾರದು ; ಆದರೂ ಅವರ ಸಂಖ್ಯೆ ಬಲು ಕಡಿಮೆ. ಅಲ್ಲದೆ ನೀತಿಬೋಧೆ, ಶುಷ್ಕವೂ ಬೇಸರ ತರುವಂಥಾದ್ದೂ ಅಹುದು. ನೀತಿಸೂತ್ರಗಳ ಹೊರೆ ಹೆಚ್ಚಾದಷ್ಟೂ ನೀತಿಭಂಗ ಹೆಚ್ಚು. ಕಲಾವಿದರು ಉಪಾಧ್ಯಾಯರಲ್ಲ, ಧರ್ಮಬೋಧಕರಲ್ಲ; ಅಂದಚೆಂದದ ಕೃತಿಗಳನ್ನು ಹೊರತರುವವರು ಮಾತ್ರ. ಉತ್ತಮ ಕಲಾಕೃತಿಯಿಂದ ಕಲಾಸ್ವಾದಿಗಳೆಗೆ ದೊರಕುವ ಲಾಭ ಇದೇ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಕೆಲವು ಮಾತುಗಳನ್ನು ವಿವರಿಸಿ ಆ ಲಾಭದ ಲಕ್ಷಣವನ್ನು ಪರಿಚಯ ಮಾಡಿಕೊಡಬಹುದು. ಮೊಟ್ಟಮೊದಲಣ ಮಾತು ಹರ್ಷ; ಕಾವ್ಯವನ್ನು ಓದಿಯೋ ವಿಗ್ರಹವನ್ನು ನೋಡಿಯೋ ಸಂಗೀತವನ್ನು ಕೇಳಿಯೋ ನಾವು ಸಂತೋಷ ಪಡುತ್ತೇವೆ. ಪ್ರತಿಯೊಂದು ಕಲೆಯೂ ತನ್ನ ತನ್ನ ವಿಧದಲ್ಲಿ ಸಂತೋಷವನ್ನು ದಯಪಾಲಿಸುತ್ತದೆ. ಇಲ್ಲಿ ಒಂದು ವಿಚಾರ ಅಗತ್ಯ. ಸಂತೋಷವೆಂದರೇನು? ಅದರಲ್ಲಿ ದರ್ಜೆಗಳಿಲ್ಲವೆ? ಪರ ಹಿಂಸೆಯಿಂದ, ದೌರ್ಜನ್ಯವಿಕ್ಷಣೆಯಿಂದ ವಿಕೃತ ಕಾಮನೆಗಳಿಂದ ಸಂತೋಷ ಉಂಟಾಗುವುದಿಲ್ಲವೆ? ಇಲ್ಲಿ ಸಂತೋಷವೆಂದರೆ ಶುದ್ಧ ಸಂತೋಷವೆಂದು ಭಾವ. ಸತ್ ಆನಂದ, ಸತ್ ಸಂತೋಷ ಕೊಡುವುದು ಕಲೆಯ ಕೆಲಸ. ಕಲೆ ಒಳ್ಳೆಯದೇ ಕೆಟ್ಟದೇ ಎಂದು ನಿರ್ಧರಿಸುವ ಅಂಶ ಅದರ ಪರಿಣಾಮವಾದ ಆನಂದವನ್ನು ಅವಲಂಬಿಸಿದೆ. ಅದು ಸತ್‍ಪರಿಣಾಮಕಾರಿಯಾದರೆ ಕಲೆಯೂ ಸತ್‍ಕಲೆಯಾಗುತ್ತದೆ. ಮನೋವೈಶಾಲ್ಯ ಎಂಬುದು ಎರಡನೆಯ ಮಾತು. ಕಲಾಕೃತಿಯ ಸಂಪರ್ಕದಿಂದ ನಮ್ಮ ಮನಸ್ಸು ವಿಶಾಲವಾದಂತೆ ಅನಿಸುತ್ತದೆ. ನಮ್ಮ ಸ್ವಂತ ಜೀವನದಲ್ಲಿ ನಮಗೆ ದಕ್ಕದ, ಬಹುಶಃ ದಕ್ಕಲಾರದ, ಅಪೂರ್ವಾನುಭವ ನಮಗೆ ದೊರೆಯುತ್ತದೆ. ಹೃದಯ ಉಲ್ಲಾಸದಿಂದ ಎದ್ದು ಕುಣಿಯುತ್ತದೆ. ಮನಸ್ಸು ಘನ ಅಭಿಪ್ರಾಯಗಳನ್ನು ತಳೆದು ದೊಡ್ಡದಾಗುತ್ತದೆ. ಮೇಲಾಗಿ ಯಾವುದೋ ಬಗೆಯಲ್ಲಿ ನಮ್ಮ ಆತ್ಮ ಬೆಳೆದು ಎತ್ತರವಾದಂತೆ ತೋರುತ್ತದೆ. ನಮ್ಮ ವ್ಯಕ್ತಿತ್ವದ ಗ್ರಹಿಕೆಗೂ ವಿಕಾಸಕ್ಕೂ ಹೀಗೆ ಕಲೆ ನೆರವಾಗುತ್ತದೆ. ಇವೆಲ್ಲವೂ ಇರುವಾಗ ಬರಿಯ ನೀತಿಮಾಲೆಯನ್ನು ಕಲೆಯಿಂದ ನಿರೀಕ್ಷಿಸಿದರೆ ಅದಕ್ಕೆ ಅನ್ಯಾಯ ಮಾಡಿದಂತೆ. ನೀತಿಯೆಂಬುದನ್ನು ಉದಾರಾರ್ಥದಲ್ಲಿ ತೆಗೆದುಕೊಡರೆ ಮಾತ್ರ ಕಲೆಯೊಳಕ್ಕೆ ಅದನ್ನು ಸೇರಿಸಬಹುದು.

 

(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ